ಜಯಕೀರ್ತಿ
-	ಛಂದೋನುಶಾಸನ ಎಂಬ ಸಂಸ್ಕøತ ಛಂದೋಗ್ರಂಥದ ಕರ್ತೃ. ಈತನ ಬೇರೆ ಗ್ರಂಥಗಳಾವುವೂ ತಿಳಿದುಬಂದಿಲ್ಲವಲ್ಲದೆ ಬೇರೆ ಯಾವ ಗ್ರಂಥಕರ್ತೃವೂ ಈತನನ್ನು ಹೆಸರಿಸಿದಂತೆ ತೋರುವುದಿಲ್ಲ. ಈತ ಜೈನ ಎಂಬುದು ಗ್ರಂಥಾದಿಯ ವರ್ಧಮಾನ ಜಿನಸ್ತುತಿಯಿಂದ ಸೂಚಿತವಾಗುತ್ತದೆ. ಗ್ರಂಥದಲ್ಲಿ ಅರ್ಹಂತ ಮಹಿಮೆಯ ಸ್ತುತಿ, ಅಲ್ಲಲ್ಲಿ ಜೈನಪರಿಭಾಷಾ ಶಬ್ದಗಳ ಬಳಕೆ, ಜೈನಕವಿ ಕಾವ್ಯ ಲಾಕ್ಷಣಿಕರನ್ನು ವಿಶೇಷವಾಗಿ ಉಲ್ಲೇಖಿಸಿರುವುದು-ಈತ ಜೈನನೆಂಬುದಕ್ಕೆ ಪೂರಕವಾಗುತ್ತವೆ. ಈತ ದಿಗಂಬರ ಜೈನಸಂನ್ಯಾಸಿಯೆಂದು ಎಚ್. ಡಿ.ವೇಲಣಕರ್ ಅಭಿಪ್ರಾಯಪಟ್ಟಿದ್ದಾರಲ್ಲದೆ ಈತನ ಕಾಲವನ್ನು ಕ್ರಿ.ಶ. 1000-1113 ಎಂದು ಊಹಿಸಿದ್ದಾರೆ.

	ಜಯಕೀರ್ತಿ ಸ್ಮರಿಸಿದ ಪೂರ್ವ ಕವಿಗಳು ಹಾಗೂ ಲಾಕ್ಷಣಿಕರಲ್ಲಿ ಅಸಗ, ಜನಾಶ್ರಯ, ಜಯದೇವ, ಪಿಂಗಳ, ಪೂಜ್ಯಪಾದ, ಭರತ, ಸ್ವಯಂಭು-ಈ ಕೆಲವರ ಹಾಗೂ ಅವರ ಕೃತಿಗಳ ವಿಚಾರ ಪ್ರಸಿದ್ಧವಾದ್ದು. ಉಳಿದವರ ವಿಚಾರ ಅಷ್ಟಾಗಿ ತಿಳಿಯದು. 

	ಕರ್ಣಾಟಕ ಕುಮಾರ ಸಂಭವ, ಕಾವ್ಯ, ಕರ್ಣಾಟಕ ಮಾಲತೀಮಾಧವ ಕಾವ್ಯ, ಕರ್ಣಾಟೇಶ್ವರ ಕಥಾ (ಅರ್ಹತ), ಗೋಗ್ರಹ (ಕಾವ್ಯ?), ಮಹಾರ್ಹದ್ದೇವತಾಸ್ತವ, ಶೃಂಗಾರ ಪಿಂಡಕಾವ್ಯ-ಇವು ಈತ ಉಲ್ಲೇಖಸಿರುವ ಗ್ರಂಥಗಳು. ಸಪ್ತಮಾಧಿಕಾರದಲ್ಲಿ ಉಲ್ಲೇಖಗೊಂಡ ಗ್ರಂಥನಾಮಗಳು, ಜಯಕೀರ್ತಿಯ ಕನ್ನಡ ಸಾಹಿತ್ಯ ಪರಿಜ್ಞಾನವನ್ನು ಸೂಚಿಸುವ ಸಾಕ್ಷ್ಯಗಳಾಗಿವೆ. ಅವು ಯಾವುವೂ ಈಗ ದೊರೆಯುವುದಿಲ್ಲ. ಆದರೆ ಅಂದಿನ ಕನ್ನಡ ಸಾಹಿತ್ಯದ ವಿಸ್ತಾರ ಹಾಗೂ ವೈವಿಧ್ಯವನ್ನು ತಿಳಿಯಲು ಇರುವ ಆಕರಗಳಲ್ಲಿ ಛಂದೋನುಶಾಸನವು ಒಂದಾಗಿದೆ. ಸಂಸ್ಕøತ ವರ್ಧಮಾನ ಮತ್ತು ಶಾಂತಿಪುರಾಣಗಳ ಕರ್ತೃವಾಗಿ ಖ್ಯಾತನಾಗಿರುವ ಅಸಗ ಕವಿ ಕರ್ಣಾಟಕ ಕುಮಾರಸಂಭವ ಎಂಬ ಕನ್ನಡ ಕಾವ್ಯದ ಕರ್ತೃ ಕೂಡ ಆಗಿದ್ದ ಸಂಗತಿ ತಿಳಿಯುವುದೂ ಭವಭೂತಿಯ ಮಾಲತೀಮಾಧವ ಕನ್ನಡಕ್ಕೆ ಇಳಿದಿತ್ತೆಂಬ ಸ್ಪಷ್ಟವಾದ ಕುರುಹು ದೊರೆಯುವುದೂ ಇದರಿಂದಲೇ. ಇದರಿಂದ ಜಯಕೀರ್ತಿ ದಕ್ಷಿಣಭಾರತದವನೆಂದೂ ಬಲುಮಟ್ಟಿಗೆ ಕನ್ನಡಿಗನೆಂದೂ ಊಹಿಸಲು ಅವಕಾಶವಿದೆ.

	ಛಂದೋನುಶಾಸನ, ಜೈಸಲ್ಮೇರ್ ಜೈನಭಂಡಾರದ ಓಲೆ ಪ್ರತಿಗಳ ಕಟ್ಟಿನಲ್ಲಿ ನಿಕ್ಷಿಪ್ತವಾಗಿದ್ದುದನ್ನು ಮೊದಲಬಾರಿಗೆ ಕಂಡುಹಿಡಿದು, ದೊರೆತ ಏಕೈಕ ಪ್ರತಿಯನ್ನೇ ಸಂಪಾದಿಸಿ ಪ್ರಕಟಿಸಿದವರು ಮುಂಬಯಿಯ ಎಚ್.ಡಿ.ವೇಲಣಕರ್ ಅವರು. ಮುಂಬಯಿಯ ಹರಿತೋಷ ಸಮಿತಿಯಿಂದ ಮಲೆಯ ಮೊದಲ ಪುಸ್ತಕವಾಗಿ ಹೊರಬಂದ ಜಯದಾಮನ್ ಎಂಬ ಛಂದೋಗ್ರಂಥಗಳ ಸಮುಚ್ಚಯ ಸಂಪುಟದಲ್ಲಿದು ಪ್ರಕಟವಾಯಿತು (1949).

	ಗ್ರಂಥದಲ್ಲಿ 8 ಅಧಿಕಾರಗಳಿದ್ದು, ಅವು ಕ್ರಮವಾಗಿ ಸಂಜ್ಞಾ;, ಸಮವೃತ್ತ, ಅರ್ಧಸಮವೃತ್ತ ವಿಷಮವೃತ್ತ, ಆರ್ಯಾಜಾತಿ, ಮಾತ್ರಾಸಮಕಜಾತಿ, ಮಿಶ್ರ, ಕರ್ಣಾಟ ವಿಷಯ ಭಾಷಾ ಜಾತಿ, (ಪ್ರಸ್ತಾರಾದಿ ಪ್ರತ್ಯಯ)-ಎಂಬ ಹೆಸರುಳ್ಳವಾಗಿವೆ. ಮೊದಲಿಂದ ಕೊನೆಯವರೆಗೆ ವಿಷಯನಿರೂಪಣೆ ಸಂಸ್ಕøತಪದ್ಯದಲ್ಲಿದೆ; ಬಳಸಿರುವ ಛಂದಸ್ಸು ಸಾಧಾರಣವಾಗಿ ಅನುಷ್ಟುಪ್, ಆರ್ಯೆ ಮತ್ತು ಸ್ಕಂಧಕ. ವಿವಿಧ ವೃತ್ತಗಳ ಸ್ವರೂಪವನ್ನು ಹೇಳುವಲ್ಲಿ ಮಾತ್ರ ಆಯಾ ವೃತ್ತಜಾತಿಯೇ ಬಳಕೆಯಾಗಿದೆ; ಎಂದರೆ ಲಕ್ಷಣ-ಲಕ್ಷ್ಯ ಸಮೀಕರಣವಿಧಾನವನ್ನು ಅನುಸರಿಸಿದೆ. ನಿರೂಪಣೆಯಲ್ಲಿ ಮುಖ್ಯವಾಗಿ ಸಂಸ್ಕøತ ಛಂದಸ್ಸಿನ ವರ್ಣವೃತ್ತಗಳಿಗೆ ಪ್ರಾಧಾನ್ಯ ಸಂದಿದೆ. ಕೆಲವು ಸಂಸ್ಕøತ ಮಾತ್ರಾವೃತ್ತಗಳನ್ನೂ ತಾಳವೃತ್ತಗಳನ್ನೂ ಹೇಳಿದೆ. ಪ್ರಾಕೃತ ಛಂದಸ್ಸಿನ ವಿಷಯವಿಲ್ಲ. ಸಪ್ತಮಾಧಿಕಾರ ಪೂರ್ತಿ ಅಚ್ಚಕನ್ನಡ ಛಂದಸ್ಸಿನ ಬೇರೆ ಬೇರೆ ಮಟ್ಟುಗಳ ವಿವರಣೆಗೆ ಮೀಸಲಾಗಿದೆ. ಇದು ಈ ಗ್ರಂಥದ ಒಂದು ವಿಶೇಷ. ಈ ಭಾಗ ಛಂದೋಂಬುಧಿಯ ಪಂಚಮಾಧಿಕಾರದ ಸದೃಶ ಭಾಗದೊಡನೆ ಹತ್ತಿರದಿಂದ ಹೋಲುವುದರಿಂದ, ಕೆಲವರು ಆ ಕನ್ನಡ ಛಂದೋಗ್ರಂಥದ ಪ್ರಭಾವವನ್ನು ಇಲ್ಲಿ ಗುರುತಿಸಿದ್ದಾರೆ. ಹೀಗೆಯೇ ಇತರ ಅಧಿಕಾರಗಳಲ್ಲಿಯೂ ವಿಷಯ ಮತ್ತು ನಿರೂಪಣೆಗಳಲ್ಲಿ ಕನ್ನಡ ಛಂದಸ್ಸಿನ ಕನ್ನಡತನದ ಪ್ರಭಾವ ಕೆಲಮಟ್ಟಿಗೆ ತೋರುತ್ತದೆ. ಕೆಲವು ವರ್ಣವೃತ್ತಗಳ ಹೆಸರು, ಲಕ್ಷಣಗಳು, ಮಾಲಾವೃತ್ತ, ಗುಣ ಎಂಬ ಮಿಶ್ರವೃತ್ತ, ದ್ವಿಪದಿ, ಉತ್ಸವ ಮತ್ತು ಲಯೋತ್ತರವೃತ್ತಗಳು, ಉತ್ಸವ, ದಂಡಕ, ಸ್ಕಂದ (ಕಂದ), ರಗಳೆ, ಅಕ್ಕರ, ಷಟ್ಟದಿ, ತ್ರಿಪದಿ ಮುಂತಾದ ಅಚ್ಚಗನ್ನಡ ವೃತ್ತಗಳು. ಪ್ರಾಸಲಕ್ಷಣ- ಇಂಥ ಕೆಲವು ಛಂದೋವಿಷಯಗಳಲ್ಲಿ ಅದನ್ನು ಗಮನಿಸಬಹುದು. ಕನ್ನಡ ಈ ದೃಷ್ಟಿಯಿಂದ ಗಮನಾರ್ಹವಾದ್ದು. ಇವೆಲ್ಲ ಜಯಕೀರ್ತಿ ಕನ್ನಡಿಗನೆಂಬುದನ್ನು ಪ್ರಕಟಿಸುವ ಸಾಕ್ಷ್ಯಗಳು, ಸ್ವೀಯ ವಿಮರ್ಶೆಯಿಂದ ಅಲ್ಲಲ್ಲಿ ಈತ ಕನ್ನಡ ಛಂದಸ್ಸಿನ ವಿವೇಚನೆಗೆ ಪೂರಕವೂ ಪೋಷಕವೂ ಆದ ಹೊಸ ಅಂಶಗಳನ್ನು ಕೂಡಿಸಿರುವುದು ಮೆಚ್ಚತಕ್ಕದ್ದಾಗಿದೆ.                                               (ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ